Saturday 26 March 2011

ಚಂದ್ರಮ



ಕಣ್ಮುಚ್ಚಿ ತೆರೆದರೆ ನಿನ್ನೊಲುಮೆ ಬೆಳದಿಂಗಳು

ಮನವೆಲ್ಲ ಬೆಳಗಿ ನಗುವಾದ ಸಂಭ್ರಮವು

ಭಾವನೆಯ ಎದೆಯಲ್ಲಿ ಅಲೆಯಾದ ಸವಿಗಾಳಿ

ಬಚ್ಚಿಟ್ಟ ಕನಸಿಗೆ ಕಚಗುಳಿಯ ರಂಗೋಲಿ.

*****

ಬೆಳದಿಂಗಳಂಗಳದಿ ಮೈಚೆಲ್ಲಿ ನಿಂದೆ

ತಂಗಾಳಿಯಲೆಯಲ್ಲಿ ಇಹವನ್ನೆ ಕೊಂದೆ

ಕಲ್ಪನೆಯ ರಥವೇರಿ ಕನಸೊಂದ ಕಂಡೆ

ಎಚ್ಚೆತ್ತು ಮುಗುಳ್ನಕ್ಕು ನಾ ಒಳಗೆ ಬಂದೆ !

*****

ಹಗಲ ಹುಡುಕಾಟದಿ ಇದ್ದೆನಗೆ ಬೆಳಕ ಬೆಳುದಿಂಗಳ ಸವಿಸಿ !

ಮತ್ತೆಂದೋ ಸಿಗುವ ಭರವಸೆಯ ಇರಿಸಿ !

ಮೋಡದಲೆಯಲಿ ನೀ ನಿಂತೆ...

 ಬೆಳಕ ಬಾಳಿನಲು ಬಯಸುತಿದೆ ಮನ

 ಆ ಇರುಳನ್ನೇ... ನೀ ಜೊತೆ ಬರುವ ಕ್ಷಣವನ್ನೇ ....

Friday 11 March 2011

ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ


ಹಲವು ಮಾತಿನ ನಡುವೆಯೂ ಕೇಳಿತೊಂದು ಮೌನ ದನಿ  

ಕಂಡ ಕಂಗಳ ನಡುವೆಯೂ ಕಾಡುತಿದೆ ಆ ಒಂದು ಕಾಣದ ಜೋಡಿ 

ಎಷ್ಟು ಕೇಳಿತೋ ? ಎಷ್ಟು ಕಾಡಿತೋ ? ತಿಳಿಯದು ...

ಆದರೂ ಅರಿಯದೊಂದು ಹೆಸರಿಗೆ ಮೂಡಿಬಿಟ್ಟಿದೆ ಭಾವ 

ಮನದಲ್ಲೇ ಆಣೆ ಪ್ರಮಾಣ !

ಕನಸಿನಲೆಯಲ್ಲೂ ತೇಲುತಿದೆ ಸಾಲು ಸಾಲು

ಧರ್ಮೇಚ ಅರ್ಥೇಚ ಕಾಮೇಚ ನಾತಿಚರಾಮಿ.


Thursday 10 March 2011

ತಿರುವು

 

ತೆಕ್ಕೆ ಮಡಿಲಿನಲಿ ಅಡಗಿದ್ದ ಬೇನೆಗಳು 
ಹೊರ ಬಾರದಿರೆ ಗೋಜಲು !
ಬಂದು ನನ್ನೊಳಗಿನ ಆಲೋಚನೆಯ ಹಿಡಿದಿಡಲು 
ಬೇರೆಯೇ ತಿರುವು ... 

ಭಾವ ಅರಿತ ಜೀವದಲಿ ಹುದುಗಿದ್ದು ಮಗುವಂತೆ 
ಕಣ್ಣೆರಡು ತೆರೆದರು ಕತ್ತಲೆಯ ಅಡರು !
ಬಿದ್ದ ಕಾಲಲಿ ಸುರಿಯುತಿದೆ ಹೆಪ್ಪುಗಟ್ಟಿದ ಗಾಯ 
ನಡೆದ ಪರಿವಿಗೆ ಸಾಕ್ಷ್ಯ ಧೂಳ ಪಾದ ...

ಕನಸಿನರಮನೆಗೆ ಬಿದ್ದ ಕಲ್ಲ ಏಟಿಂದ
ಹನಿಯಾಗಿ ಒಡೆದಿರಲು ಗಾಜಪದರು 
ಒತ್ತಿ ಬರುತಲಿದೆ ಮಾತ ಮಣಿ ಮುಳ್ಳು 
ಹೇಳಲಾಗದಿರೋ ಬಿಕ್ಕಟ್ಟು ...

ಹಸಿವು ಬಯಕೆಯ ಜಗದಿ ಹಿಡಿ ಭಾವಕಲೆದು
ಕೊನೆಗೂ ಸಿಕ್ಕಿತು ಅಕ್ಷಯದ ಬಿಂದು, ವಾಸ್ತವತೆಯ ಮುರುಕು ! 
ಮುಷ್ಠಿಬಿಗಿಯಲೇ ಹಿಡಿದು ಹೊರಟ ಯಾನದಿ ಬಂತು 
ಅಮ್ಮ ತಾಯಿಯ ನೆನಹು ...

ಪಡೆದ ಬವಣೆಗೆ ಹೊಣೆ ಯಾರ ಮಾಡಿದರು 
ಹೊರಲೇ ಬೇಕಿರಲು ಹಣೆ ಬರಹ ! 
ಸದ್ದು ಗೊಡವಿರದೆ ಸಂಯಮದ ಒದ್ದಾಟದಲೇ 
ಪಡೆಯ ಬೇಕಿದೆ ಆತ್ಮ ಸಾಕ್ಷಾತ್ಕರ .

*****

Monday 28 February 2011

ಸುದ್ದಿ




ಮನೆ ಮನದ ಪಿಸುಮಾತುಗಳ ಜಾಹಿರಾತಾಗಿ ಭಿತ್ತಿಸಿ 
ಒಳಗೊಳಗೇ ಚಿಂತನೆಯ ಚದುರಂಗ ಹೆಣೆಸಿ 
ಮುಗ್ಧತೆಯ ಮಡಿವಂತಿಕೆ ಕೊನೆಮಾಡಿ ಹರಿಯೋ ಸುದ್ದಿ ! 


ಕುರುಡು ಅಮಲಿನಲಿ ಕುಣಿದು, ಹುಳುಕು ಬುದ್ಧಿಯನು ಹೊಸೆದು 
ಇರುವ ಸಂಗತಿಯ ಲೋಕ ಸತ್ಯೆಯಲಿ ಒಡಮೂಡಿಸುವ 
ವಿಸ್ತಾರ ಆಲೋಚನೆಯ ಸಂದಿಗ್ಧ ಸೂಕ್ಷ್ಮ ಸುದ್ದಿ ! 


ಸ್ಥಿತಿಯ ಅಂತರಾಳವ ಹುಡುಕ ಹೊರಟು 
ಮೂಲ ಜಾಡನೆ ಮರೆಮಾಚಿ 
ಕಣ್ಣೆದುರಲೆ ದ್ವಂದ್ವಜನಿಕೆಗೆ ಕಾರಣೀಧಾತು ಸುದ್ದಿ !

*****

Saturday 26 February 2011

ನೇಸರ





ಇದ್ದ ಸಮಯದಲಿ ಜೊತೆಯಾಗಿ

ಬೆಳಕ ಉಸಿರಿನಲಿ ಹದವಾಗಿ

ನಿಂತಿದ್ದ ಜೀವ ಧಾತುವಿನ ಸೂರ್ಯಾಸ್ತಮಾನ !


ಕರೆಯ ಕೊಳಲಿಗೆ ಓಗೊಟ್ಟು

ನಿಶ್ಚಲ ಮೌನ ನಗೆಯಲೆ

ಕಾರ್ಯ ಕಾರಣವ ಸತ್ಕರಿಸಿ 

ಮರಳಿ ಮಗುವಾಗೆ ಸೂರ್ಯಾಸ್ತಮಾನ !

*****

Tuesday 15 February 2011

ನಕ್ಷತ್ರ



ಹೊಳೆವ ಗುಣಕೆ ಮರುಳಾಗಿ, ಮಂದ ಬೆಳಕಲೆ ಕನಸಕಂಡು 

ಭಾವಪದ ಮಾಲೆಯನೆ ಅರ್ಪಿಸಿದರು 

ಒಲಿದೆ ನಗುವ, ನೆನಪಾಗಿ ಉಳಿವ ನಕ್ಷತ್ರ !


ಮೋಹ ಪರಿಧಿಯ ಹಿಂದೆ ಸಾತ್ವಿಕತೆಯ ಮನವೊಂದು 

ಬಳಗವಿದ್ದು ಬೆಳದಿಂಗಳಿಗೆ ಹಂಬಲಿಸೋ ನಕ್ಷತ್ರ ! 


ನಿರೀಕ್ಷೆಯ ಒಲವಿಗೆ ನೀಡಲಾರದು ತಂಬೆಳಕ 

ಹಸಿದ ಮನಕೆ ಚೇತನವ ಉಣಬಡಿಸೋ ನಕ್ಷತ್ರ !


ಎಲ್ಲರಲು ಒಂದಾಗಿ ಕಂಡೂ ಕಾಣದಾಗಿ 

ಬಾನ ಬಾಳಲಿ ನಡೆಯೋ ಅಸಹಾಯಕ ಚುಕ್ಕಿ ನಕ್ಷತ್ರ !


ಶ್ವೇತಕ್ಕೆ ಶರಣಾಗಿ ಕತ್ತಲಿಗೆ ಬರಿದಾಗಿ 

ಅರಳಿ ಮರಳಿ ಶೂನ್ಯದಲೆ ನೆಲೆಯಾಗೋ ನಕ್ಷತ್ರ !

*****



ಕತ್ತಲೆಯ ಜೀವ



ಬದುಕ ಹಂಗಲ್ಲಿ ಸಾಗಿ ಮೈಲುದೂರ

ತಿರುಗಿ ನೋಡಲು ಹಾಗೆ ಇದ್ದ, ಕತ್ತಲೆಯ ಜೀವ !



ಹಿಡಿತ ಮಿಡಿತವಿರದಿದ್ದರು ಬದ್ಧತೆಯ ಜೊತೆನೀಡೋ

ಆತ್ಮ ಗೆಳೆತನದ, ಕತ್ತಲೆಯ ಜೀವ !



ಬೆಳಕ ಬವಣೆಯಲಿ ಅಲೆದು

ತಂಪ ಕನವರಿಕೆಯಲಿ ನೆನೆದು

ಹರಿಬಿಟ್ಟ ಕಣ್ಣಿಗೆ ತಿರುಮುರುಗಾಗಿ ಕಾಣೋ, ಕತ್ತಲೆಯ ಜೀವ !