Thursday, December 16, 2010

ನಿನ್ನೀಕ್ಷಿಸಿ


ಅದೇಕೆ (?) ಒಲಿದೆನೋ ಮೋಹನನೆ ನಿನಗೆ

ನನ್ನೆದೆಯ ಅನುರಾಗ ಬಿರಿಸಿ

ಮೌನ ಮೋಹವೆ ಸೆಳೆತವೋ ?

 ಭಾವ ಲಹರಿಯ ತುಡಿತವೋ ?

ಕಣ್ಣಲೆಯುತಿದೆ ನಿನ್ನೀಕ್ಷಿಸಿ ...


*****


 ಅಲೆಮಾರಿ ನೀನು ಜೊತೆ ನನಗೆ ಇನ್ನೆಲ್ಲಿ (?)... 

 ಸೋತು ನಿಂತಿರುವೆ ನಾನು ಕಳೆದು ಹೋಗುವ ಒಲವಲ್ಲಿ ... 

 ***** 
ಮನಸು ಹಸಿರಾಗಿ ಭಾವ ಉಸಿರಾಗಿ 
ನಿನ್ನೊಲುಮೆ ನೆನಪೇ ಹೂವಾಗಿ 
ಕನಸು ನನಸಿನಲು ಜೀವ ಜಡದಲು 
ಹೊನ್ನ ಕಿರಣಗಳ ದೀಪ ! 
ಹುಚ್ಚು ಪ್ರೀತಿಯಲು ಹರಿವ ನೋಟದಲು 
ಪ್ರತಿಬಿಂಬ ಆ ನಿನ್ನ ರೂಪ

****


ನಿತ್ಯ ಅರಳುವ ಬಯಕೆ 

ಉಸಿರ ರಾಗದಿ ಬೆರೆತು 

ಮನದಿ ಕಂಪನು ಹರಡಿದೆ 

ನಿನ್ನ ಹೆಸರನೆ ಜಪಿಸಿದೆ

***** 

ಸೆಳೆವ ಮೋಹದ ಬಲೆ ಇಲ್ಲ 

ಪಡೆವ ಹಟದ ಜಾಡಲ್ಲ 

ಅಗಲಿಕೆಯ ವಿರಹವಿಲ್ಲಿಲ್ಲ 

ಮತ್ತದೇ ಒಲವ ರಾಗದ ಪ್ರಾರ್ಥನೆ 

ಬೆಸೆದ ಹೆಸರಿಗೆ ನನ್ನ ಜೀವಂತ ಕುರುಹಿಗೆ 

*****   

ನನ್ನೊಳಗಿನ  ಅರಿವಿಂದು ತಡೆಯುತಿದೆ ನಿನ್ನನ್ನು 

ತಡೆವ ಅರಿವನೇ ತುಳಿದು ತೇಲುತಿದೆ ನಿನ್ನ ನೆನಪಿಂದು ... 

***** 

ಹುಚ್ಚು ಹಂಬಲವ ತಡಕಿ ನೋಡಿದರು 

ಸಿಕ್ಕಿದ್ದು ಹಿಡಿ ಕನಸು ! ಮುರುಟಿ ಬಿದ್ದಿದ್ದ ಒಲವು . 

*****
ಬದುಕ ಹಂಗಲ್ಲಿ ಸಾಗಿ ಮೈಲುದೂರ

ತಿರುಗಿ ನೋಡಲು ಹಾಗೆ ಇದ್ದ, ಕತ್ತಲೆಯ ಜೀವ !


ಹಿಡಿತ ಮಿಡಿತವಿರದಿದ್ದರು ಬದ್ಧತೆಯ ಜೊತೆನೀಡೋ

ಆತ್ಮ ಗೆಳೆತನದ, ಕತ್ತಲೆಯ ಜೀವ !


ಬೆಳಕ ಬವಣೆಯಲಿ ಅಲೆದು

ತಂಪ ಕನವರಿಕೆಯಲಿ ನೆನೆದು

ಹರಿಬಿಟ್ಟ ಕಣ್ಣಿಗೆ ತಿರುಮುರುಗಾಗಿ ಕಾಣೋ, ಕತ್ತಲೆಯ ಜೀವ !

*****


ಇದ್ದ ಸಮಯದಲಿ ಜೊತೆಯಾಗಿ

ಬೆಳಕ ಉಸಿರಿನಲಿ ಹದವಾಗಿ

ನಿಂತಿದ್ದ ಜೀವ ಧಾತುವಿನ ಸೂರ್ಯಾಸ್ತಮಾನ !


ಕರೆಯ ಕೊಳಲಿಗೆ ಓಗೊಟ್ಟು

ನಿಶ್ಚಲ ಮೌನ ನಗೆಯಲೆ

ಕಾರ್ಯ ಕಾರಣವ ಸತ್ಕರಿಸಿ 

ಮರಳಿ ಮಗುವಾಗೆ ಸೂರ್ಯಾಸ್ತಮಾನ !

*****
ಕಣ್ಮುಚ್ಚಿ ತೆರೆದರೆ ನಿನ್ನೊಲುಮೆ ಬೆಳದಿಂಗಳು

ಮನವೆಲ್ಲ ಬೆಳಗಿ ನಗುವಾದ ಸಂಭ್ರಮವು

ಭಾವನೆಯ ಎದೆಯಲ್ಲಿ ಅಲೆಯಾದ ಸವಿಗಾಳಿ

ಬಚ್ಚಿಟ್ಟ ಕನಸಿಗೆ ಕಚಗುಳಿಯ ರಂಗೋಲಿ.

*****

ಬೆಳದಿಂಗಳಂಗಳದಿ ಮೈಚೆಲ್ಲಿ ನಿಂದೆ

ತಂಗಾಳಿಯಲೆಯಲ್ಲಿ ಇಹವನ್ನೆ ಕೊಂದೆ

ಕಲ್ಪನೆಯ ರಥವೇರಿ ಕನಸೊಂದ ಕಂಡೆ

ಎಚ್ಚೆತ್ತು ಮುಗುಳ್ನಕ್ಕು ನಾ ಒಳಗೆ ಬಂದೆ !

*****

ಹಗಲ ಹುಡುಕಾಟದಿ ಇದ್ದೆನಗೆ ಬೆಳಕ ಬೆಳುದಿಂಗಳ ಸವಿಸಿ !

ಮತ್ತೆಂದೋ ಸಿಗುವ ಭರವಸೆಯ ಇರಿಸಿ !

ಮೋಡದಲೆಯಲಿ ನೀ ನಿಂತೆ...

 ಬೆಳಕ ಬಾಳಿನಲು ಬಯಸುತಿದೆ ಮನ

 ಆ ಇರುಳನ್ನೇ... ನೀ ಜೊತೆ ಬರುವ ಕ್ಷಣವನ್ನೇ ....

Wednesday, December 15, 2010

ಆಧುನಿಕ ರಾಧೇ ಮತ್ತವಳ ಕೃಷ್ಣ


ತೇಲಿ ಬರುತ್ತಿರುವ ತಂಗಾಳಿ, ಮತ್ತದರ ಸ್ಪರ್ಶ ಮನಸ್ಸಿಗೆ ಮುದ ನೀಡುತ್ತಾ ನನ್ನ ಚಿತ್ತ ಚಂಚಲವಾಗಿಸ್ತಿದೆ. ಯಾಕೋ ಪುಸ್ತಕದಲ್ಲಿ ಮನ ಹಾಯ್ತಿಲ್ಲ, ಕೂತಿದ್ದ ಚೇರನ್ನ ರೂಮಿನ ಕಿಟಕಿ ಹತ್ರ ಹಾಕ್ಕೊಂಡ್ರೆ ಇರುಳು ತನ್ನ ಬೆಡಗನ್ನ ಗೋಚರಿಸಿ ತನ್ನತ್ತ ಸೆಳಿತಿದೆ.
ಮನಸ್ಸನ್ನ ಬರಿದಾಗಿಸೋ ಕತ್ತಲು, ಪ್ರಶಾಂತವಾದ ತಂಗಾಳಿ, ಅರಿವಿನಾಚೆಯ ಯಾವುದೋ ಒಂದು ಭಾವಯಾನದತ್ತ ಸಾಗ್ತಿದೀನಿ. ಕಂಗೊಳಿಸೋ ತಾರೆಗಳ ಮಧ್ಯೆ ನಿಂತು ನಗ್ತಾ ನನ್ನ ಭಾವಕ್ಕೆ ಕಚಗುಳಿಯಿಟ್ಟು, ಕನಸಿನ ಕಿಚ್ಚು ಹಬ್ಬಿಸೋ ಚಂದ್ರನನ್ನ ಕಂಡ್ರೆ ಒಂಥರಾ ಆತ್ಮೀಯತೆ. ಯಾಕಂದ್ರೆ ಬಾಳಿನ ಪಯಣದಲ್ಲಿ ಎಷ್ಟೋ ಜನ ಬಂದು ಹೋಗ್ತಾರೆ, ಜೊತೆ ಉಳಿಯವ್ರು ಯಾರೋ, ಹೋಗೊವ್ರು ಯಾರೋ! ಆದ್ರೆ ಚಂದಿರ ತಪ್ಪದೆ ಬರ್ತಾನೆ, ತನ್ನ ಬಯಸೋ ಹೃದಯಗಳಿಗೆ ಬೆಳದಿಂಗಳ ಅಪ್ಪುಗೆ ಇತ್ತು ನಗೆ ಮುತ್ತು ಚೆಲ್ತಾನೆ. ಈಗೇಕೋ ನನ್ನ ನೋಡಿ ಅಣಕಿಸ್ತಿದಾನೇನೋ ಅನ್ನೋ ಭಾಸ. ಈ ಏಕಾಂತಕ್ಕೆ ತಾನೋಬ್ನೇ ಸಾರಥಿ ಅನ್ನೋ ಥರ ! ಆದ್ರೂ ಕೋಪ ಬರೋಲ್ಲ.. ನೋಡ್ತಾನೆ ಇರೋಣ, ಬೆಳದಿಂಗಳಲ್ಲಿ ನನ್ನೇ ನಾ ಮರೆಯೋಣ ಅನ್ಸತ್ತೆ, ಇಂದೇಕೋ ಭಾವೋದ್ವೇಗದಿಂದ ನೆನಪುಗಳ ಅನಾವರಣ ಆಗ್ತಿದೆ.
ಪ್ರೀತಿ ಅನ್ನೋ ರಾಗದಲ್ಲಿರೋ ಉನ್ನತ ಸ್ಥಾಯಿಯ ಅರಿವಾದದ್ದು ನನ್ನ ಹುಡ್ಗನ್ನ ಭೇಟಿ ಆದ್ಮೇಲೆ. ಆ ವನಮಾಲಿಜೊತೆ ದಿನವಿಡೀ ಮಾತು ಹರಟೆ ನಡೀತಿತ್ತು. ನಡು ರಾತ್ರಿವರೆಗೂ ಎಚ್ಚರವಾಗಿರ್ತಿದ್ದ ಕಾರಣ ಬೆಳಿಗ್ಗೆ ತಡವಾಗಿ ಎದ್ದು ಮನೇಲಿ ಬೈಸ್ಕೊಳೋದು, ಕಾಲೇಜಿಗೂ ತಡವಾಗಿ ಹೋಗಿ ಕ್ಲಾಸ್ ಮಿಸ್ ಮಾಡ್ಕೊಳೋದು. ಕಂಡು ಕಾಣದಂತಿದ್ದವನ ಭಾವ ನೆಚ್ಕೊಂಡು ಸಂಭ್ರಮ ಪಡೋದು. ಆದ್ರೂ ಚೆನ್ನಾಗಿತ್ತು ಸಂಜೆ ಮಲ್ಲಿಗೆ ಥರ ನೆನಪು ಕ್ಷಣದಲ್ಲಿ ಮನಸ್ಸನ್ನ ಅರಳಿಸಿ ಕೆರಳಿಸಿ ಮರಯಾಗತ್ತೆ.
ಯಾಕೆ ನನ್ನ ಆ ಹುಡ್ಗ ಅಷ್ಟು ಕಾಡ್ತಾನೆ? ನನ್ನೇ ನಾ ಕೇಳ್ಕೊಂಡು ಕೇಳ್ಕೊಂಡು ಸಾಕಾಗ್ತಿದೆ, ಅತೀ ಭಾವುಕ ಹುಡುಗಿ ನಾನು, ತುಂಬಾ ವಾಸ್ತವಿಕ ಹುಡ್ಗ ಅವ್ನು, ಎಲ್ಲಿ ಸಾಮ್ಯ ? ಆದ್ರೂ ನಂಗವ್ನು ಒಂಥರಾ ಹಿಡಿಸ್ದಾ ಅಲ್ವಾ... ? ಅವ್ನಿಗೂ ನಾನೂ ........? ಸರಿಯಾಗಿ ಗೊತ್ತಿಲ್ಲ. ಎಷ್ಟೋ ಸಲ ಹೇಳಿದ್ದ ನೀ ನಂಗೆ ಇಷ್ಟ ಆಗ್ತಿಯ ಕಣೆ ಅಂತ, ಹುಡುಗಾಟಕ್ಕೆ ಹೇಳ್ತಾನೆ ಅಂದ್ಕೊಂಡಿದ್ದೆ, ನಾನು ಮತ್ತೆ ಕೇಳ್ಲಿಲ್ಲ ಹೇಳೋಕೆ ಅವನು ಜೋತೆಯಲಿಲ್ಲ, ಗೊಂದಲದಲ್ಲೇ ಉಳಿದೋಯ್ತು ಮನಸ್ಸಿನ ಮಾತುಗಳು. ನನ್ನ ಗೋಳು ತಿನ್ನೋದ್ರಲ್ಲೇ ಅವನಿಗೆ ಖುಷಿಯಾಗ್ತಿತ್ತೇನೋ? ಯಾವಾಗಲು ಗೋಳುಹುಯ್ಕೋತಿದ್ದ, ಸಿಕ್ಕಾಪಟ್ಟೆ ರೆಗಿಸ್ತಿದ್ದ, ನಾ ಏನಾದ್ರೂ ಕೋಪಿಸ್ಕೊoಡ್ರೆ ಮುದ್ದಾದ ಮಾತಲ್ಲೇ ಸಂತೈಸ್ತಿದ್ದ, ಒಟ್ಟಿನಲ್ಲಿ ಅವನ ಜೊತೆ ಮಾತಾಡ್ತಿದ್ರೆ ಸಮಯ ಉರುಳೋದರ ಅರಿವು ಇರುತಿರಲಿಲ್ಲ. ಅವನು ಭಾವಜೀವಿ ಅಲ್ದೆ ಇದ್ರೂ ಭಾವಕ್ಕೆ ಬೆಲೆ ಕೊಡ್ತಿದ್ದ, ನನ್ನ ಭಾವಗಳಿಗೆ ಸ್ಪಂದಿಸ್ತಿದ್ದ. ಬರೀ ಸ್ನೇಹಿತರಾದ್ರೂ ನಾವೂ ತುಂಬಾ ಆತ್ಮೀಯರಾಗಿದ್ವಿ. ಸತ್ಯ ಇಬ್ರಿಗೂ ಗೊತ್ತಿತ್ತು, ಆದ್ರೂ ಎಂದೂ ಬಿಚ್ಚಿ ಮಾತಾಡ್ಲಿಲ್ಲ, ಬರೀ ಸಂದೇಶ ಕರೆಗಳಲ್ಲೇ ನಮ್ಮ ಸಂಭಾಷಣೆ. ಅವನ ಬಗ್ಗೆ ಗೊತ್ತು ನಂಗೆ ಸ್ವಲ್ಪ ಅಲ್ಲ, ಪೂರಾ ರಸಿಕ, ಚೆನ್ನಾಗಿರೋ ವಸ್ತು ಮೇಲೆ ಆಕರ್ಷಣೆ. ಅವನ ಕೃಷ್ಣ ಲೀಲೆಗಳಿಗೆ ನಾ ಯಾಕೆ ಒಲಿದ್ಬಿಟ್ಟೆ ? ಮನ್ಮಥ ಅಲ್ಲ ಆದ್ರೆ ಮಾತಿನ ಮಲ್ಲ, ಮೋಡಿ ಮಾಡ್ಬಿಟ್ಟಿದಾನೆ ನಂಗೂ.. ಯಾವ್ದೋ ಒಂದು ಸಣ್ಣ ಮನಸ್ತಾಪಕ್ಕೆಇಷ್ಟು ಮುನಿಸೇ? ಭಾವಗಳ ಕೂಡಿ ಬೆಸೆದಿರೋ ಬಂಧ ಪರಿಸ್ಥಿತಿ ಪ್ರಕಾರವಾಗಿ ಬದಲಾಗತ್ತಾ ? ಬದಲಾಗೊದಾದ್ರೆ ಅಲ್ಲಿ ಭಾವ ಇತ್ತಾ? ಬಂಧ ಬೆಸೆದಿತ್ತಾ !? ಒಂದು ಸೂಕ್ಷ್ಮ ಸಂಗತಿ ಮೇಲೆ ತೊಯ್ದಾಡ್ತಿರೋ ನನ್ನ ಅನಿಸಿಕೆಗಳ ಕಂಡು ನಂಗೆ ನಗು ಬರ್ತಿದೆ. ಬದುಕಲ್ಲಿ ಅವನ್ನ ಮತ್ತೆ ಪಡಿತೀನಿ ಅನ್ನೋ ನಂಬಿಕೆ ನನಗಿಲ್ಲ, ಹಾಗಂತ ಅದಕ್ಕೆ ನಂಗೆ ಹತಾಶೆ ಆಗ್ತಿಲ್ಲ, ಆದ್ರೂ ಅವನು ಜೊತೇಲಿ ಇದ್ದಿದ್ರೆ ಅಂತ ಅಷ್ಟೇ, ಹೇಳೋಕೆ ಆಗ್ದಿರೋ ಭಾವ. ಅವ್ನು ಕೃಷ್ಣ ನಾನು ರಾಧೆನೇ ತಾನೇ.. ? ಹೇಳಿದ್ದ, ನೀ ನನ್ನ ರಾಧೆ ಕಣೆ ಅಂತ, ಅವನಿರೋವರೆಗೂ ಯಾವತ್ತೂ ನಂಗೆ ಅನ್ನಿಸ್ಲಿಲ್ಲ. ದೂರ ಹೋದ್ಮೆಲೇನೆ ತಿಳಿದದ್ದು ಅವನು ಹೇಳಿದ್ದು ನಿಜ ಅಂತ. ಯಾಕೆ ಅವನ್ನ ಆಗ್ಲೇ ನಾನು ಕೇಳ್ಲಿಲ್ಲ ? ನಾನು ನಿನ್ನ ರಾಧೆ ಆಗ್ಬೇಕಾ ಕೃಷ್ಣಾ ರುಕ್ಮಿಣಿ ಆಗ್ತೀನೋ ಅಂತ? ನಿನಗೆ ಭಾಮೆ ಗೋಪಿಯರಿದ್ದಾರೆ ಅಂತ ತಿಳಿದಾಗ ಅಸೂಯೇಪಟ್ಟೆ, ನಾನೊಬ್ಳೇ ನಿನ್ನವಳಾಗಿರ್ಬೇಕು ಅಂತ ಬಯಸಿದೆ , ಆದ್ರೆ ಎಂದೂ ನಿಂಗೆ ತಿಳಿಸ್ಲೇ ಇಲ್ಲ.. ಮುಂದೆ ನಡೆದು ಹೋದೆ ನೀನು,  ನಿನ್ನಗಲಿದ  ನಾನು ಹಿಂದೇನೆ ಉಳಿದೆ, ಜೊತೇಲೇ ಸಾಗಬಹುದಿತ್ತು ಅಲ್ವಾ ? ನಿಜಕ್ಕೂ ರಾಧೆ ಆಗೇ ಉಳಿದ್ಬಿಟ್ಟೆ ಅಲ್ವೆನೋ... ? ಈಗ ಅನ್ನಿಸ್ತಿದೆ, ನೀನು ಭಾಮೆ ಗೋಪಿಯರಯರನ್ನಾದ್ರೂ ಬಯಸು, ಆದ್ರೆ ನನ್ನ ಜೊತೆ ಇದ್ದಾಗ ನನ್ನವ್ನಾಗಿ ಮಾತ್ರ ಇರು ಸಾಕಷ್ಟೇ ಅಂತ. ಯಾವುದೇ ವಿಷ್ಯ ತಗೊಂಡ್ರೂ ಕೊನೆಯಲ್ಲಿ ಮುಗಿಯೋದೇ ಈ ವಿಷಯದಿಂದ ಯಾಕೋ ಹೀಗಾಗತ್ತೆ? ನೀ ನನ್ನ ಜೋತೆಗಿದ್ದಿದ್ರೆ.... ಏನೋ ಸಮಾಧಾನ ಇರ್ತಿತ್ತೋ.. ಕೃಷ್ಣಾ ನಿನ್ನ ರಾಧೆ ಜೊತೆಗಿನ ದಿನಗಳು ಒಂದು ನೆನಪಿಲ್ವೇನೋ...? ನನಗೋಸ್ಕರ ಕಾಲೇಜಿಗೆ ಬಂಕ್ ಮಾಡಿದ್ದು, ರಾತ್ರಿ ಪೂರ ಚಾಟ್ ಮಾಡಿದ್ದು ಯಾವ್ದು ಇಲ್ವಾ!? ಒಂದೂ ಸಲಾನೂ ನಿಂಗೆ ನನ್ನ ನೆನಪು ಬರ್ಲಿಲ್ವಾ...? ಯಾಕೋ ಹಿಂಗೆ ಕಾಡ್ತಿಯಾ? ಅಂತ ನನ್ನಲ್ಲೇ ನಾ ಅವನ್ನ ಪ್ರಶ್ನಿಸಿದರೆ ಉತ್ತರ ತಿಳಿಮೊಗದಲ್ಲಿ ಸ್ಪಷ್ಟ ನಗು, ಏನುತ್ತರವೋ ಏನೋ, ನಂಗೆ ಅರ್ಥವೇ ಆಗ್ತಿಲ್ಲ! ಸಮರ್ಥನೆಯೋ, ಕ್ಷಮೆಯೋ, ಮತ್ತಿನ್ನೇನೋ? ನಿನಗೆ ಗೊತ್ತು ಅಂದ್ಕೊಳ್ತಾ ಕಣ್ಣು ವರೆಸಿಕೊಂಡು ವಾಸ್ತವಕ್ಕೆ ಬಂದು ಸಮಯದತ್ತ ಕಣ್ಣು ಹಾಯಿಸಿದಾಗ್ಲೆ ನಡು ರಾತ್ರೆಯ ಅರಿವು. ನಿಟ್ಟುಸಿರ ಬಿಟ್ಟು ದೀಪ ಆರಿಸಿ ಮಲಗಿದ್ರೆ ಯಾಕೋ ನಿದ್ದೆ ಬರ್ತಿಲ್ಲ. ಮೊಬೈಲ್ ತಗೊಂಡು ಒಂದು ಹಾಡು ಕೇಳೋಣಾoತ, 'ನೀ ಸಿಗದೇ ಬಾಳೊಂದು ಬಾಳೆ ಕೃಷ್ಣಾ'... ಹಾಕಿ ಮಲಗಿದ್ರೆ, ಕಿಟಕಿ ಇಂದ ಇಣುಕ್ತಿರೋ ಚಂದಿರ, ನಾನು ಅವನ್ನ ದಿಟ್ಟಿಸ್ತಿರೋವಾಗ್ಲೆ ಸಂದರ್ಭಕ್ಕೂ, ಸಾಹಿತ್ಯಕ್ಕೂ, ಸೂಕ್ತವಾಗಿರೋ ಹಾಡಿನ ಪಂಕ್ತಿಯ ನಿನಾದ.. "ಜನುಮ ಜನುಮದ ರಾಗ ನನ್ನ ಪ್ರೀತಿ ನಿನ್ನೊಳಗೆ ಹರಿವುದೇ ಅದರಾ ರೀತಿ "... ಹುಡುಕ್ತಿದ್ದ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಂತಾಯ್ತು, ಹಾಡು ನಿಲ್ಲಿಸಿ ಕಣ್ಣು ಮುಚ್ಚಿದರೆ ಕನಸಿನ ಲೋಕದತ್ತ ಹೆಜ್ಜೆ ಹಾಕ್ತಿರೋ ಕಂಗಳು, ಚೆಲ್ಲಿದ ಬೆಳದಿಂಗಳಲ್ಲಿ ಬೆರೆತ ಮುಗುಳ್ನಗು.

[published in ಕನ್ನಡಪ್ರಭ on ೦೯-೦೨-೨೦೧೦ (ಸಾವಿರ ನೆನಪುಗಳ ಗಾಳಿಗೋಪುರ )]

ಆಧುನಿಕ ರಾಧೇ ಮತ್ತವಳ ಕೃಷ್ಣ 

Thursday, November 18, 2010

ಸಂಜೆ ಮಲ್ಲಿಗೆ


(ಮಲ್ಲಿಗೆ ಗಿಡ) 


ಧಾರಾಳವಾಗಿ ಸುರಿಯುತ್ತಿದ್ದ ಮಳೆ, ಆಗೀಗ ಬಂದು ಸರಿಯುತ್ತಿದ್ದ ಮಣ್ಣಿನ ಕಂಪು, ಮೈಗೊಡವಿ ನಿಲ್ಲುತ್ತಿದ್ದ ಮರಗಿಡಗಳು ಒಟ್ಟಾರೆ ಮಬ್ಬು ಬೆಳಕಿನ ಸುಂದರ ಸಂಜೆ ಅದು. ಆಲೋಚನೆಗಳಿಗೂ ಜಾಗವಿಲ್ಲದಷ್ಟು ಬದ್ಧತೆಗಳು ಬದುಕಲ್ಲಿ ಅಂಟಿರುವಾಗ, ತುಸು ಬಿಡುವಿನ ಆ ಪ್ರಾಕೃತಿಕ ಏಕಾಂತ, ನನ್ನೊಳಗೆ ಉಲ್ಲಾಸದ ಸ್ವಾಭಾವಿಕ ಉಡುಗೊರೆಯನ್ನಿತ್ತು ಹರ್ಷಿಸಿತ್ತು.ಮಿಂಚು ಗುಡುಗಿನ ಮಳೆಗೆ ಬೆದರುತ್ತಾ ಕುಳಿತಲ್ಲೇ ಮುದುರಿ, ಮತ್ತೊಮ್ಮೆ ಕಿಟಕಿಯಿಂದ ಇಣುಕುವ ಮೋಜಿನ ಆಟದಲ್ಲಿ ಪ್ರಸಕ್ತ ಸ್ಥಿತಿಯನ್ನು ಅವಲೋಕಿಸುವ ಕಾರ್ಯ ಕೂಡ ನಡೆದಿತ್ತು. ಈ ಸಹಜವಾದ ಬದುಕಲ್ಲಿ ಕ್ಲಿಷ್ಟವಾದ ಭಾವಗಳನ್ನು ಕಟ್ಟಿಕೊಂಡು ಸೆಣಸಾಡುತ್ತಾ ಸಾಗುತ್ತೇವೆ, ಯಾಂತ್ರಿಕ ಜೀವನ ಶೈಲಿಯಲ್ಲಿ ನಾವು ವರಿಸುವ ಅನಧಿಕೃತ ಭಾವಗಳು ನಮ್ಮ ಅರಿವಿಗೆ ಬಾರದಂತೆ ನಮ್ಮೊಳಗಿನ ನಮ್ಮನ್ನು ನಮ್ಮಿಂದ ಬೇರ್ಪಡಿಸುತ್ತವೇನೋ(?)ಅನ್ನಿಸಿತು. 

ಮಳೆಗೆ ಕೈನೀಡಿ ಹನಿಯನ್ನು ಬೊಗಸೆಯಲ್ಲಿ ಹಿಡಿಯುವ ಯತ್ನ ಮಾಡುವಾಗ ಅಂಗಳದ ಮಲ್ಲಿಗೆಯ ಬಳ್ಳಿ ಕಾಣಿಸಿತು. ಹಸಿರ ತೋರಣದಲ್ಲಿ ತೊಳೆದು ಪೋಣಿಸಿದ ಮುತ್ತಂತಿದ್ದ ಮಲ್ಲಿಗೆಯನ್ನು ಮುಡಿಯುವ ಮನಸ್ಸಾಯಿತು, ಮಳೆಯ ತೀವ್ರತೆ ಕಡಿಮೆಯಾಗಲೆಂದು ದೇವರಲ್ಲಿ ಮೊರೆ ಇಟ್ಟು ಕುಳಿತೆ, ತುಂಬು ನಗೆಯ ಮಲ್ಲಿಗೆ ತನ್ನೆಡೆಗೆ ಸೆಳೆಯುತ್ತಲೇ ಇತ್ತು. ಅರ್ಧ ತಾಸಿನ ಬಳಿಕ ಮಳೆಯ ಗತಿ ಇಳಿದಂತಿತ್ತು, ತುಂತುರಿನಲ್ಲೇ ಮಲ್ಲಿಗೆಯನ್ನು ಬಿಡಿಸಿ ತಂದೆ,ಅಂಗೈಲಿ ಮಲ್ಲಿಗೆಯನ್ನು ಕಂಡು ಏನೋ ಸಂಭ್ರಮ ಅಮ್ಮನಿಗೆ ಮಲ್ಲಿಗೆಯನ್ನು ಕಟ್ಟಿಕೊಡಲು ಹೇಳಿ ಜಡೆ ಹೆಣೆದುಕೊಳ್ಳಲು ಒಳನಡೆದೆ. 

ಮಲ್ಲಿಗೆ ಕಟ್ಟಿ ತಂದ ಅಮ್ಮ ಮುಡಿಸಿ 'ಮುದ್ದಾಗಿ ಕಾಣಿಸ್ತಿದೀಯ' ಕಣೆ ಅಂದ ಆ ಕ್ಷಣವೆಲ್ಲಾ ಉಲ್ಲಾಸದ ಅಕ್ಷಯವಾಗಿತ್ತು. ಹಣೆಗೆ ಕುಂಕುಮ, ಕೈಲಿ ಬಳೆ, ಮುಡಿಯಲ್ಲಿ ಹೂ ನಿಜಕ್ಕೂ ಆ ಘಳಿಗೆಯಲ್ಲಿ ಮನಸ್ಸು ಮದುಮಗಳಾಗಿತ್ತು. 
ಮನೆಯಲೆಲ್ಲರಿಗೂ ಮುಡಿದ ಮಲ್ಲಿಗೆಯ ತೋರಿಸಿ ಮೆಚ್ಚುಗೆಯ ಪಡೆದು ಇತ್ತಿಂದತ್ತ ಅಲೆದು ಅಂಗಳದಲ್ಲೇ ಬಂದು ನಿಂತೆ, ತುಂತುರು ಇನ್ನೂ ಶ್ರುತಿಯಲ್ಲಿತ್ತು, ಮಲ್ಲಿಗೆ ಬಳ್ಳಿಯತ್ತ ದೃಷ್ಟಿ ಹರಿದಾಗ ಮಾತ್ರ ಕಸಿವಿಸಿ ಆಯಿತು, ಮೊದಲ ಬಾರಿ ಕಂಡಂತಿರಲಿಲ್ಲ, ಮಲ್ಲಿಗೆ ಸಿಕ್ಕಿದ್ದರ ಸಂತೋಷದಲ್ಲಿದ್ದವಳು ಆಗ ಹಿಂದಿರುಗಿ ನೋಡೇ ಇರಲಿಲ್ಲ, ಈಗೇಕೋ ಅಂಗಳದಲ್ಲಿ ಶೂನ್ಯ ಸ್ಥಭ್ಧ, ಗಿಡದಿಂದ  ಬೇರ್ಪಟ್ಟ ಮಲ್ಲಿಗೆಯನ್ನು ನೆನೆದು ಮನಸು ಮುದುಡಿತು,ತಟಸ್ಥವಾಗಿ ಅಲ್ಲೇ ನಿಂತೆ, ಮುಡಿಯ ಹೂವನ್ನು ತೆಗೆದು ನೋಡಿದಾಗ ಶುಭ್ರ ನಗೆಮಲ್ಲಿಗೆ ನಲುಗುತ್ತಿರುವ ಭಾಸವಾಯಿತು. ಮಲ್ಲಿಗೆ ಮುಡಿದು ಅಂಗಳಕ್ಕೆ ಬಂದಾಗಿದ್ದ ಸಂಭ್ರಮ ತಿರುಗಿ ನಡೆವಾಗ ಇರದಾಗಿತ್ತು. 
ತಪ್ಪಿತಸ್ಥ ಭಾವ,ನನ್ನ ತುಡಿತದ ಸಲುವಾಗಿ ಕ್ಷೀಣವಾಗುವ ಮಲ್ಲಿಗೆಯನ್ನು ನೆನೆದು ಕಣ್ಣು ತುಂಬಿತು... ಮುಡಿಯಲ್ಲಿನ ಮಲ್ಲಿಗೆ ಸಾರ್ಥಕತೆಯ ನಗೆ ಬೀರುತ್ತಾ ಸಂಜೆ ಸಂಗಾತಿಯಾಗಿತ್ತು.

ಮುಳ್ಳು ಚೆಂಡು

ಮುಳ್ಳು ಚೆಂಡು