Thursday, November 18, 2010

ಸಂಜೆ ಮಲ್ಲಿಗೆ

(ಮಲ್ಲಿಗೆ ಗಿಡ) 


ಧಾರಾಳವಾಗಿ ಸುರಿಯುತ್ತಿದ್ದ ಮಳೆ,  ಆಗೀಗ ಬಂದು ಸರಿಯುತ್ತಿದ್ದ ಮಣ್ಣಿನ ಕಂಪು, ಮೈಗೊಡವಿ ನಿಲ್ಲುತ್ತಿದ್ದ ಮರಗಿಡಗಳು ಒಟ್ಟಾರೆ ಮಬ್ಬು ಬೆಳಕಿನ ಸುಂದರ ಸಂಜೆ ಅದು. ಆಲೋಚನೆಗಳಿಗೂ ಜಾಗವಿಲ್ಲದಷ್ಟು ಬದ್ಧತೆಗಳು ಬದುಕಲ್ಲಿ ಅಂಟಿರುವಾಗ, ತುಸು ಬಿಡುವಿನ ಆ ಪ್ರಾಕೃತಿಕ ಏಕಾಂತ, ನನ್ನೊಳಗೆ ಉಲ್ಲಾಸದ ಸ್ವಾಭಾವಿಕ ಉಡುಗೊರೆಯನ್ನಿತ್ತು ಹರ್ಷಿಸಿತ್ತು.ಮಿಂಚು ಗುಡುಗಿನ ಮಳೆಗೆ ಬೆದರುತ್ತಾ ಕುಳಿತಲ್ಲೇ ಮುದುರಿ, ಮತ್ತೊಮ್ಮೆ ಕಿಟಕಿಯಿಂದ ಇಣುಕುವ ಮೋಜಿನ ಆಟದಲ್ಲಿ ಪ್ರಸಕ್ತ ಸ್ಥಿತಿಯನ್ನು ಅವಲೋಕಿಸುವ ಕಾರ್ಯ ಕೂಡ ನಡೆದಿತ್ತು. ಈ ಸಹಜವಾದ ಬದುಕಲ್ಲಿ ಕ್ಲಿಷ್ಟವಾದ ಭಾವಗಳನ್ನು ಕಟ್ಟಿಕೊಂಡು ಸೆಣಸಾಡುತ್ತಾ ಸಾಗುತ್ತೇವೆ, ಯಾಂತ್ರಿಕ ಜೀವನ ಶೈಲಿಯಲ್ಲಿ ನಾವು ವರಿಸುವ ಅನಧಿಕೃತ ಭಾವಗಳು ನಮ್ಮ ಅರಿವಿಗೆ ಬಾರದಂತೆ ನಮ್ಮೊಳಗಿನ ನಮ್ಮನ್ನು ನಮ್ಮಿಂದ ಬೇರ್ಪಡಿಸುತ್ತವೇನೋ(?)ಅನ್ನಿಸಿತು. 

ಮಳೆಗೆ ಕೈನೀಡಿ ಹನಿಯನ್ನು ಬೊಗಸೆಯಲ್ಲಿ ಹಿಡಿಯುವ ಯತ್ನ ಮಾಡುವಾಗ ಅಂಗಳದ ಮಲ್ಲಿಗೆಯ ಬಳ್ಳಿ ಕಾಣಿಸಿತು. ಹಸಿರ ತೋರಣದಲ್ಲಿ ತೊಳೆದು ಪೋಣಿಸಿದ ಮುತ್ತಂತಿದ್ದ ಮಲ್ಲಿಗೆಯನ್ನು ಮುಡಿಯುವ ಮನಸ್ಸಾಯಿತು, ಮಳೆಯ ತೀವ್ರತೆ ಕಡಿಮೆಯಾಗಲೆಂದು ದೇವರಲ್ಲಿ ಮೊರೆ ಇಟ್ಟು ಕುಳಿತೆ, ತುಂಬು ನಗೆಯ ಮಲ್ಲಿಗೆ ತನ್ನೆಡೆಗೆ ಸೆಳೆಯುತ್ತಲೇ ಇತ್ತು. ಅರ್ಧ ತಾಸಿನ ಬಳಿಕ ಮಳೆಯ ಗತಿ ಇಳಿದಂತಿತ್ತು, ತುಂತುರಿನಲ್ಲೇ ಮಲ್ಲಿಗೆಯನ್ನು ಬಿಡಿಸಿ ತಂದೆ,ಅಂಗೈಲಿ ಮಲ್ಲಿಗೆಯನ್ನು ಕಂಡು ಏನೋ ಸಂಭ್ರಮ ಅಮ್ಮನಿಗೆ ಮಲ್ಲಿಗೆಯನ್ನು ಕಟ್ಟಿಕೊಡಲು ಹೇಳಿ ಜಡೆ ಹೆಣೆದುಕೊಳ್ಳಲು ಒಳನಡೆದೆ. 

ಮಲ್ಲಿಗೆ ಕಟ್ಟಿ ತಂದ ಅಮ್ಮ ಮುಡಿಸಿ 'ಮುದ್ದಾಗಿ ಕಾಣಿಸ್ತಿದೀಯ' ಕಣೆ ಅಂದ ಆ ಕ್ಷಣವೆಲ್ಲಾ ಉಲ್ಲಾಸದ ಅಕ್ಷಯವಾಗಿತ್ತು. ಹಣೆಗೆ ಕುಂಕುಮ, ಕೈಲಿ ಬಳೆ, ಮುಡಿಯಲ್ಲಿ ಹೂ ನಿಜಕ್ಕೂ ಆ ಘಳಿಗೆಯಲ್ಲಿ ಮನಸ್ಸು ಮದುಮಗಳಾಗಿತ್ತು. 
ಮನೆಯಲೆಲ್ಲರಿಗೂ ಮುಡಿದ ಮಲ್ಲಿಗೆಯ ತೋರಿಸಿ ಮೆಚ್ಚುಗೆಯ ಪಡೆದು ಇತ್ತಿಂದತ್ತ ಅಲೆದು ಅಂಗಳದಲ್ಲೇ ಬಂದು ನಿಂತೆ, ತುಂತುರು ಇನ್ನೂ ಶ್ರುತಿಯಲ್ಲಿತ್ತು, ಮಲ್ಲಿಗೆ ಬಳ್ಳಿಯತ್ತ ದೃಷ್ಟಿ ಹರಿದಾಗ ಮಾತ್ರ ಕಸಿವಿಸಿ ಆಯಿತು, ಮೊದಲ ಬಾರಿ ಕಂಡಂತಿರಲಿಲ್ಲ, ಮಲ್ಲಿಗೆ ಸಿಕ್ಕಿದ್ದರ ಸಂತೋಷದಲ್ಲಿದ್ದವಳು ಆಗ ಹಿಂದಿರುಗಿ ನೋಡೇ ಇರಲಿಲ್ಲ, ಈಗೇಕೋ ಅಂಗಳದಲ್ಲಿ ಶೂನ್ಯ ಸ್ಥಭ್ಧ, ಗಿಡದಿಂದ  ಬೇರ್ಪಟ್ಟ ಮಲ್ಲಿಗೆಯನ್ನು ನೆನೆದು ಮನಸು ಮುದುಡಿತು,ತಟಸ್ಥವಾಗಿ ಅಲ್ಲೇ ನಿಂತೆ, ಮುಡಿಯ ಹೂವನ್ನು ತೆಗೆದು ನೋಡಿದಾಗ ಶುಭ್ರ ನಗೆಮಲ್ಲಿಗೆ ನಲುಗುತ್ತಿರುವ ಭಾಸವಾಯಿತು. ಮಲ್ಲಿಗೆ ಮುಡಿದು ಅಂಗಳಕ್ಕೆ ಬಂದಾಗಿದ್ದ ಸಂಭ್ರಮ ತಿರುಗಿ ನಡೆವಾಗ ಇರದಾಗಿತ್ತು. 
ತಪ್ಪಿತಸ್ಥ ಭಾವ,ನನ್ನ ತುಡಿತದ ಸಲುವಾಗಿ ಕ್ಷೀಣವಾಗುವ ಮಲ್ಲಿಗೆಯನ್ನು ನೆನೆದು ಕಣ್ಣು ತುಂಬಿತು... ಮುಡಿಯಲ್ಲಿನ ಮಲ್ಲಿಗೆ ಸಾರ್ಥಕತೆಯ ನಗೆ ಬೀರುತ್ತಾ ಸಂಜೆ ಸಂಗಾತಿಯಾಗಿತ್ತು.

ಬಳುವಳಿ

ನನ್ನ ಪ್ರತಿಕ್ರಿಯೆ ನಿಮ್ಮ ಅಪೇಕ್ಷಿತದಾಗಿಲ್ಲ‌ ಎಂದು ಕುಪಿತರಾದರೆ‌ ನಿಮಗೆ‌ ಹತಾಶೆ‌ ಬಳುವಳಿಯಾಗಿ ತಲುಪಲಿದೆ.