Tuesday, July 15, 2014

ಒಂದೊಮ್ಮೆ ಹೀಗೂ ಆಗುವುದುಂಟು

A  state 


ಎಷ್ಟೋಸಲ ನಿದ್ದೆಯಿಂದೆದ್ದು ನಾ ಎಲ್ಲಿದ್ದೀನಿ ಎಂದು ಗಾಬರಿಗೊಂಡು ನೆನಪಿಸಿಕೊಂಡದ್ದಿದೆ, ಬರಬರುತ್ತಾ ನನ್ನ ಸುತ್ತಲಿನ ಜಗತ್ತು ಮತ್ತು ಜನಗಳ ಪರಿಚಯವನ್ನು ಮೆಲುಕುತ್ತಾ ಕಣ್ಣು ಬಿಟ್ಟಿದ್ದಿದೆ, ಎಲ್ಲಕ್ಕಿಂತ ಸೋಜಿಗವೇನೆಂದರೆ ಅದೂಂದು ದಿನ, ಬೆಳ್ಳಂಬೆಳಗು ಎಚ್ಚರವಾಗಿ ಎದ್ದು ಕೂತವಳಿಗೆ ಕಾಡಿದ್ದು 'ನಾ ಯಾರು'? ನಾ ಎಲ್ಲಿದ್ದೀನಿ? ಯಾಕಿಲ್ಲಿದೀನಿ... !!!???

ಹಾಸ್ಟೆಲ್, ರೂಮ್ ಮೆಟ್ಸ್, ಕಾಲೇಜ್, ಅಪ್ಪ ಅಮ್ಮ ಉಹೂಂ ಯಾರೂ ಯಾವುದೂ ನೆನಪಾಗದೆ ಅರ್ಥವಾಗದೆ ತಲೆಯಲ್ಲಿ ನಡೆಯುತ್ತಿದ್ದ ಘರ್ಷಣೆಯ ಪ್ರತಿಧ್ವನಿಯಾದ ತಲೆನೋವನ್ನು ಸಹಿಸಲಾರಳೆಂದು ತಲೆಗೂದಲ ಬಿಗಿಹಿಡಿದು ಕೂತಿದ್ದು. ಕಣ್ಣು ತೇವವಾಗಿತ್ತು, ನಡುನೆತ್ತಿ ಉರಿಯಲಾರಂಭಿಸಿತ್ತು. ಎದ್ದು ಹಾಸ್ಟೆಲ್ ರೂಮಿನ ಕಿಟಕಿಯ ಬಳಿ ನಿಂತವಳಿಗೆ ಮುಂಜಾವಿನ ಸಂಭ್ರಮದಲ್ಲಿ ಮರೆತಂತೆ ಅನಿಸಿದ್ದೆಲ್ಲಾ ಸ್ಮೃತಿಗೆ ತಾಗಿ ಮನಸು ಶಾಂತವಾಯಿತು.

ಬದಲಾವಣೆಗೆ ಒಗ್ಗಿಕೊಳ್ಳುವ ಮುನ್ನ ದೇಹ ಹಾಗೂ ಮನಸ್ಸು ಪ್ರತಿರೋಧ ಒಡ್ಡುವುದು ಸ್ವಾಭಾವಿಕ. ಹೂಸತನದಲ್ಲಿನ ಅಪೇಕ್ಷೆಗಳ ಜೊತೆ ಆತಂಕಗಳೂ ಗೂಡುಕಟ್ಟಿಕೊಂಡಿದ್ದರ ಫಲಿತಾಂಶ ಈ ಪ್ರತಿಕ್ರಿಯೆಗಳು ಎಂಬುದು ಅರಿವಾಗುತ್ತಿದೆ.

"Ignorance gives pleasure" ಅನ್ನೋದು ನನ್ನ ಮಟ್ಟಿಗೆ ನೂರರಷ್ಟು ಸತ್ಯ. ವಿಚಾರಗಳು ನಮ್ಮನ್ನು ತಿಳುವಳಿಕಸ್ಥರನ್ನಾಗಿ ಮಾಡಿದರೆ, ವಿವೇಕ ಕ್ರಿಯಾಶೀಲರನ್ನಾಗಿ ಮಾಡುತ್ತೆ, ಅದಕ್ಕೆ ನಂಗೆ ಇದ್ಯಾವುದೂ ಬೇಡವಾಗಿರೋದು. ಮುಗ್ಥತ್ವ ಮತ್ತು ಸಾತ್ವಿಕತೆಯ ಬದುಕು ಕಲ್ಪಿತವಾಗಿರೋವಾಗ ವಾಸ್ತವದ ಕಠಿಣತೆಯಲ್ಲಿ ಪ್ರಜ್ಞಾಪೂರ್ವಕವಾಗಿಯೇ ಸಾಗಬೇಕೆಂಬ ಅನಿವಾರ್ಯತೆ ಅಸಹಾಯಕಳನ್ನಾಗಿಸುತ್ತೆ.

ಅಂದು ಮೊದಲುಗೊಂಡ ಪ್ರಶ್ನೆಗಳು ಇಂದಿಗೂ ಬೆನ್ನಟ್ಟುತ್ತಲೆ ಸಾಗಿ ಬಂದಿವೆ. ನನ್ನೊಳಗಿನ ನನ್ನ ಹುಡುಕಾಟದ ಪ್ರಥಮ ತಂತು ಅದೆಂಬುದು ಖಾತ್ರಿಯಾಗಿದೆ. ಇತ್ತೀಚೆಗಂತೂ ಮೂಲಭೂತ ಪ್ರಶ್ನೆಗಳು ನನ್ನ ಅಸ್ತಿತ್ವವನ್ನೇ ಅಲುಗಾಡಿಸುತ್ತಲಿವೆ. ಹುಟ್ಟು ಸಾವು ಕರ್ಮ ಸ್ಥಿತಪ್ರಜ್ಞೆ ಹೀಗೆ ಏನೇನೋ. ಸಂತಸ ಹಾಗು ಸಂತೃಪ್ತಿಯ ನಡುವಿನ ಸಣ್ಣ ಎಳೆಯಶ್ಟಿನ ಅಂತರದ ಅರಿವಿನ್ನೂ ಮೂಡಬೇಕಿದೆ, ಸ್ಥಿತಿ ಹಾಗು ಪರಿಸ್ಥಿತಿ ಎಂದಿಗೂ ಭಿನ್ನವೇ, ಆದರೆ ಇವೆರಡರ ಸಾಮ್ಯ ಇರುವುದು ಬದಲಾವಣೆಯಲ್ಲಿ, ಹಾಗಾಗಿ ಬದಲಾವಣೆಗೆ ಮನಸ್ಸು ತಯಾರಾದರೆ ಯಾವುದೇ ಸ್ಥಿಯನ್ನಾಗಲಿ ಸುಲಭವಾಗಿ ದಾಟಬಹುದು.

ಸದಾ ಅಪ್ಪ ಅಮ್ಮನ ಪ್ರೀತಿ ಮತ್ತು ರಕ್ಷಣೆಯ ಕೊಟೆಯಲ್ಲೇ ಬೆಳೆದವಳಿಗೆ ಬದುಕಿನ ಬೆಳವಣಿಗೆಯ ಹಾದಿ ಅರ್ಥೈಸಿಕೊಳ್ಳುವಲ್ಲಿ ತಡವರಿಸುವಂತಾಗಿದೆ.


ಹೀಗೊಂದು ಬದಲಾವಣೆ


a father & a daughter 

ವರುಷಕ್ಕೆ ಒಮ್ಮೆ ನಡೆಯೋ ಜಾತ್ರೆಗಳಲ್ಲಿ , ಬಣ್ಣ ಬಣ್ಣದ ಅಂಗಡಿ ಸಾಲಿನ ಬದಿಯಲ್ಲಿ ನಿಂತು ಕಂಡಿದ್ದನ್ನೆಲ್ಲಾ ಬೇಕು ಕೊಡಿಸು ಅಂತ ಅಮ್ಮನ ಕೈ ಹಿಡಿದು ಎಳೆಯೋದು, ಯಾವುದೋ ಒಂದು ಆಟಿಕೆಯೋ ಇಲ್ಲಾ ಸರಾ ಟೇಪು ಬಳೆಯೋ ಕೊಡಿಸಿ ಕೈ ಭದ್ರವಾಗಿ ಹಿಡಿದು ನಡೆಯುತ್ತಿದ್ದಳು.

ಅಪ್ಪನ ಬಳಿ ಇಷ್ಟೆಲ್ಲಾ ದುಂಬಾಲು ಬೀಳೋ ಪ್ರಮೇಯವೇ ಇರಲಿಲ್ಲ, ಅಪ್ಪಾ ಅಂತ ಕೈ ಎಳೆದು ಅಂಗಡಿಯ ವಸ್ತುವಿನೆಡೆಯೊಮ್ಮೆ ನೋಡಿ ಅಪ್ಪನೆಡೆಗೆ ತಿರುಗಿ ನಗುತಿದ್ದೆ, ಅಪ್ಪ ನಕ್ಕು ಅಂಗಡಿಯವನಿಗೆ ಅದೇನೇನು ಬೇಕೋ ಮಗೂಗೆ ಕೊಡಪ್ಪ, ಎಷ್ಟು ಆಗತ್ತೆ ಹೇಳು ಎಂದು ಷರಟಿನ ಜೇಬಿಗೆ ಕೈಹಾಕುತ್ತಿದ್ದರು.

ಹುಡುಗ ಒಳ್ಳೆಯ ಕೆಲಸದಲ್ಲಿದಾನೆ ಕೈತುಂಬಾ ಸಂಭಾವನೆ, ಕೇಳಿ ನೋಡಿರೋ ಹುಡುಗ ಒಮ್ಮೆ ನೋಡಮ್ಮಾ ಎಂದುದಕ್ಕೆ ಮರುಮಾತಾಡದೆ ಹೊರಟುನಿಂತೆ. ಒಳಗೊಳಗಿನ ಆತಂಕ ಹಿಂಜರಿಕೆ ಇಣುಕುತ್ತಿದ್ದರು ಕೇಳಿದ್ದಕ್ಕೆಲ್ಲ ಉತ್ತರಿಸಿ ಬಂದಿದ್ದೆ.

ಮೊದಲು ಮಾತು ಪ್ರಾರಂಭಿಸಿದ ಅವನೇ ಹುಡುಗಿ ಹೀಗೆ ಇರಬೇಕೆಂಬ ಪಟ್ಟಿ ಸಲ್ಲಿಸಿದ, ಇನ್ಮಧ್ಯೆ ತಡೆದು ಎಲ್ಲಾ ಸರಿ ಆದರೆ ಕೆಲಸಕ್ಕೆ ಹೋಗುವ ಅಥವಾ ಹೋಗದಿರುವ ನಿರ್ಧಾರದ ಆಯ್ಕೆಯ ಹಕ್ಕನ್ನು ನನಗೇ ಕೊಡಬೇಕಾಗಿ ಕೇಳಿದೆ, ಆದರೆ ಅವನ ಅಸಮ್ಮತಿ ಕೇವಲ ಕೆಲಸಕ್ಕೆ ಸೇರುವುದಲ್ಲದೇ, ನಿರ್ಧರಿಸುವ ಹಕ್ಕಿನಮೇಲೂ ಇತ್ತು .
ಬೇಕೆಂದೇ ಮರುಪ್ರಶ್ನಿಸಿದೆ - " ಅಪ್ಪ ಇದುವರೆಗೂ ನಾ ಕೇಳಿದ್ದನ್ನೆಲ್ಲಾ ಕೊಡಿಸಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ, ಮದುವೇ ಎಂದಾದರೆ ಅಪ್ಪನ ಬಳಿ ಹಣ ಕೇಳೋದು ಸರಿಯಲ್ಲ, ಒಂದೋ ನಾ ದುಡಿಬೇಕು ಇಲ್ಲಾ ನನ್ನ ಮದುವೆಯಾದವನ ಬಳಿ ನನ್ನ ಅವಶ್ಯಕತೆಗಳಿಗೆ ಅವಲಂಬಿಸಬೇಕು, ಹಾಗಾಗಿ ಏನು ಮಾಡ್ಲಿ? "

ಅವನ ಉತ್ತರ- ಹೌದು ನಂಗೆ ಅರ್ಥ ಆಗತ್ತೆ ಮದುವೆಯಾದ ಹೊಸತರಲ್ಲಿ ಗಂಡನಬಳಿ ದುಡ್ಡು ಕೇಳೋದು ಕಷ್ಟನೇ, ಹಾಗೇ ಏನಾದ್ರೂ ಬೇಕು ಅಂತ demand ಮಾಡೋದಕ್ಕೂ ಆಗಲ್ಲ, ಅವನೇ ಇಷ್ಟ ಪಟ್ಟು ಕೊಡಿಸಬೇಕು ಏನಾದರೂ ಅಷ್ಟೇ, ಎಂಬುದಾಗಿತ್ತು. ಅಲ್ಲಿಗೆ ಸಂಭಾಷಣೆ ಮುಗಿಯಿತು.

ಕಲ್ಪಿಸಿಕೊಂಡ ರಾಜಕುಮಾರ ಸಿಗುವುದಿಲ್ಲವೆಂಬ ಸ್ಪಷ್ಟತೆ ಸಿಕ್ಕಿದೆ. ನನ್ನ ನಿರ್ಧಾರಗಳು ನನ್ನದೇ ಆಗಿರುತ್ತದೆ. ಹೊಸ ಬದುಕಿನ ಹುಡುಕಾಟ ಹುಡುಗಾಟವಲ್ಲ, ಕೆಲಸಕ್ಕೆ ಸೇರಿ ಒಂದು ವಾರ ಕಳೆಯಿತೇನೋ, ತಿಂಗಳ ಕೊನೆಯಲ್ಲಿ ಸಿಗುವ ಸಂಬಳದ ನಿರೀಕ್ಷೆಯಲ್ಲೇ ನಿರ್ವಹಣೆಗಳು ಶುರುವಾಗಿದೆ.

ಪ್ರತಿದಿನ ಜಾತ್ರೆಯಂತೆಯೇ ಇರುವ ಈ ಊರು, ಕೈ ಹಿಡಿದು ನಡೆಸಲು ಇಲ್ಲಿ ಅಮ್ಮ, ಬೇಕೆಂದಾಗ ಬೇಕಾದದ್ದು ಕೊಡಿಸಲು ಅಪ್ಪ ಯಾರಿಲ್ಲ. ಕಳೆದುಹೋಗದಂತೆ ನಾನೇ ನನ್ನ ನೋಡಿಕೊಳ್ಳಬೇಕಾಗಿದೆ.

ಕನ್ಯಾದಾನದ ಪುಣ್ಯ ಪಡೆಯಲಿಚ್ಚಿಸುತ್ತಿರೋ ಅಪ್ಪ, ಸಾತ್ವಿಕ ಗೃಹಿಣಿಯಾಗಿ ಸುಖವಾಗಿ ಬದುಕಲಿ ಎಂದೆನ್ನುಕೊಳ್ಳುವ ಅಮ್ಮ, ನೀನೊಬ್ಬಳೇ ಅಲ್ಲಾ ನನಗೂ ಬದುಕಿದೆ ಎಂದು ನೆನಪಿಸಲೊಬ್ಬ ಅಣ್ಣ ಎಲ್ಲರೂ ನನ್ನತ್ತಲೇ ಎದುರು ನೋಡುತ್ತಿದ್ದಾರೆ.


ಮಳೆಹನಿ

ಮಳೆಹನಿಗಳ ಜೊತೆ ಅದೇನೋ ಸಾಂಗತ್ಯ !
ಪ್ರತಿ ಸ್ಪರ್ಶದಲ್ಲೂ ಅದೇ ಹೊಸತನ... ಸ್ವಂತಿಕೆಯ ಭಾವ!!

ಆದ್ರೆ ಮಳೆಗೆ ??? ಎಲ್ಲರೂ ಒಂದೇ ಅನ್ಸತ್ತೆ ... !

ಎಲ್ಲರನ್ನೂ ನೆನೆಸುತ್ತೆ, ನೆನಪುಗಳನ್ನ ನಂಟುಹಾಕುತ್ತೆ!!
ಸಾರ್ವತ್ರಿಕವಾಗಿಬಿಡತ್ತೇನೋ !(?)...
ನಂಬಿಕೆ ಅಷ್ಟೇ ನಮ್ಮದಾ ?...

ಹುಡುಕಾಟಹೀಗೊಂದು ಪಯಣ  

ಬೆಂಗಳೂರು ಸೇರಾಯ್ತು, ಕೆಲ್ಸಾನು ಸಿಕ್ಕಾಯ್ತು , ಹಳ್ಳಿಯಲ್ಲಿ ಕೂತು ಕಂಡಿದ್ದ ಕನಸುಗಳು ಇದಲ್ಲ ಆದರೆ ಇದೇ ಅದರ ಜಾಡು.
ಇದ್ಯಾಕೋ ಒಂಥರಾ ವಿಚಿತ್ರ ಗೊಂದಲಗಳು, "ನೀ ಮಾಯೆಯೊಳಗೋ ಮಾಯೆ ನಿನ್ನೂಳಗೋ" ಅಂತಾರಲ್ಲ ಹಾಗೆ, ನಂಗೇನ್ ಬೇಕು? ಯಾಕ್ ಬೇಕು? ಇಷ್ಟೆಲ್ಲಾ ಹೊಂದಾಣಿಕೆ ಈ ಬದಲಾಗುತ್ತಿರೋ ಬದುಕಿನೊಟ್ಟಿಗೆ ಮಾಡ್ಕೊಳೋದಾದ್ರೂ ಹೇಗೆ?

ಆಸೆ ಇರ್ಬೇಕು, ನಿರ್ಭಾವುಕತೆ- ಆಸಕ್ತಿ ಮತ್ತು ಉತ್ಸಾಹಗಳನ್ನ ಕಸಿದುಕೊಳ್ಳುತ್ತೆ. ಜಡತ್ವ ಉನ್ನತ ಸ್ಥಿತಿಯೇ ? ಅಥವಾ ಈ ಸೋಮಾರಿತನವಾ ? ಆಲಸ್ಯ ಅಂತಾರಲ್ಲಾ ಅದೇ ಇರ್ಬೋದ ? ಹಾಗಿದ್ರೆ ಸನ್ಯಾಸತ್ವ!!!?

ಜಗತ್ತನ್ನೇ ಅಂಗೈಯಲ್ಲಿ ಕುಣಿಸ್ಬೇಕು ಅನ್ನೋ ದುರಾಸೆಯ ಹುಂಬ ಹುಡುಗಿಗೆ ಪುಟ್ಟದೊಂದು ಹಳ್ಳಿಯಲ್ಲಿ ಅಜ್ಞಾತವಾಗಿ ಬಾಳೋ ಆಸೆ ಹುಟ್ಟಿದ್ದರ ಅರಿವೂ ಇಲ್ವಲ್ಲಾ. ಯಾಕೀ ಬದಲಾವಣೆನೋ ನಾ ಕಾಣೆ.
"ನೀ ದೇಹದೊಳಗೋ ದೇಹ ನಿನ್ನೊಳಗೋ... ನೀ ಕನಸಿನೊಳಗೋ ಕನಸು ನಿನ್ನೊಳಗೋ" ಅಂತ ನನ್ನ ನಾನು ಕೇಳಿಕೊಂಡರೂ ಉತ್ತರ ಗೊತ್ತಾಗ್ತಿಲ್ಲ.
ಅಂದುಕೊಂಡಂತೆ ಆಗಬೇಕು ಅನ್ನೋದಾದ್ರೆ ಹಠ ಛಲ ಸ್ವಾಭಿಮಾನ ಅನ್ನೋ ಇವುಗಳೇನೇನನ್ನೋ ನಮ್ಮಲ್ಲಿ ಪೋಷಿಸುತ್ತಾ ಸಾಕುತ್ತಿರಬೇಕೇನೋ ?
ಹಳ್ಳಿ ಮನೆ ಕಾಡು ನೀರು ನಿಶ್ಶಬ್ಧ ನಿಧಾನವಾಗಿ ಸಾಗೋ ಜೀವನ ಆಹಾ ... ಜನ್ಮಾಂತರದ ಬೇತಾಳದಂತೆ ಕಾಡ್ತಿರೋ ಕನಸು, ಕೈಗೆ ಲ್ಯಾಪ್ಟಾಪ್ ಟ್ಯಾಬ್ಲೆಟ್ ಕೊಟ್ಟ ಮಾತ್ರಕ್ಕೆ ಬದಲಾದೀತೆ ? "ನೀ ಅಮಲಿನೊಳಗೋ ಅಮಲು ನಿನ್ನೊಳಗೋ" ... ಅಮಲು ಆತಂಕಗಳ ಸರಿಸಿ ಕೈ ಹಿಡಿದು ನೀ ನಡೆಸು ಹರಿಯೇ ಎಂದಷ್ಟೇ ಮನಸು ಬೇಡುತಿದೆ. 


ಮುಳ್ಳು ಚೆಂಡು

ಮುಳ್ಳು ಚೆಂಡು