Tuesday 15 July 2014

ಹೀಗೊಂದು ಬದಲಾವಣೆ


a father & a daughter 

ವರುಷಕ್ಕೆ ಒಮ್ಮೆ ನಡೆಯೋ ಜಾತ್ರೆಗಳಲ್ಲಿ , ಬಣ್ಣ ಬಣ್ಣದ ಅಂಗಡಿ ಸಾಲಿನ ಬದಿಯಲ್ಲಿ ನಿಂತು ಕಂಡಿದ್ದನ್ನೆಲ್ಲಾ ಬೇಕು ಕೊಡಿಸು ಅಂತ ಅಮ್ಮನ ಕೈ ಹಿಡಿದು ಎಳೆಯೋದು, ಯಾವುದೋ ಒಂದು ಆಟಿಕೆಯೋ ಇಲ್ಲಾ ಸರಾ ಟೇಪು ಬಳೆಯೋ ಕೊಡಿಸಿ ಕೈ ಭದ್ರವಾಗಿ ಹಿಡಿದು ನಡೆಯುತ್ತಿದ್ದಳು.

ಅಪ್ಪನ ಬಳಿ ಇಷ್ಟೆಲ್ಲಾ ದುಂಬಾಲು ಬೀಳೋ ಪ್ರಮೇಯವೇ ಇರಲಿಲ್ಲ, ಅಪ್ಪಾ ಅಂತ ಕೈ ಎಳೆದು ಅಂಗಡಿಯ ವಸ್ತುವಿನೆಡೆಯೊಮ್ಮೆ ನೋಡಿ ಅಪ್ಪನೆಡೆಗೆ ತಿರುಗಿ ನಗುತಿದ್ದೆ, ಅಪ್ಪ ನಕ್ಕು ಅಂಗಡಿಯವನಿಗೆ ಅದೇನೇನು ಬೇಕೋ ಮಗೂಗೆ ಕೊಡಪ್ಪ, ಎಷ್ಟು ಆಗತ್ತೆ ಹೇಳು ಎಂದು ಷರಟಿನ ಜೇಬಿಗೆ ಕೈಹಾಕುತ್ತಿದ್ದರು.

ಹುಡುಗ ಒಳ್ಳೆಯ ಕೆಲಸದಲ್ಲಿದಾನೆ ಕೈತುಂಬಾ ಸಂಭಾವನೆ, ಕೇಳಿ ನೋಡಿರೋ ಹುಡುಗ ಒಮ್ಮೆ ನೋಡಮ್ಮಾ ಎಂದುದಕ್ಕೆ ಮರುಮಾತಾಡದೆ ಹೊರಟುನಿಂತೆ. ಒಳಗೊಳಗಿನ ಆತಂಕ ಹಿಂಜರಿಕೆ ಇಣುಕುತ್ತಿದ್ದರು ಕೇಳಿದ್ದಕ್ಕೆಲ್ಲ ಉತ್ತರಿಸಿ ಬಂದಿದ್ದೆ.

ಮೊದಲು ಮಾತು ಪ್ರಾರಂಭಿಸಿದ ಅವನೇ ಹುಡುಗಿ ಹೀಗೆ ಇರಬೇಕೆಂಬ ಪಟ್ಟಿ ಸಲ್ಲಿಸಿದ, ಇನ್ಮಧ್ಯೆ ತಡೆದು ಎಲ್ಲಾ ಸರಿ ಆದರೆ ಕೆಲಸಕ್ಕೆ ಹೋಗುವ ಅಥವಾ ಹೋಗದಿರುವ ನಿರ್ಧಾರದ ಆಯ್ಕೆಯ ಹಕ್ಕನ್ನು ನನಗೇ ಕೊಡಬೇಕಾಗಿ ಕೇಳಿದೆ, ಆದರೆ ಅವನ ಅಸಮ್ಮತಿ ಕೇವಲ ಕೆಲಸಕ್ಕೆ ಸೇರುವುದಲ್ಲದೇ, ನಿರ್ಧರಿಸುವ ಹಕ್ಕಿನಮೇಲೂ ಇತ್ತು .
ಬೇಕೆಂದೇ ಮರುಪ್ರಶ್ನಿಸಿದೆ - " ಅಪ್ಪ ಇದುವರೆಗೂ ನಾ ಕೇಳಿದ್ದನ್ನೆಲ್ಲಾ ಕೊಡಿಸಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ, ಮದುವೇ ಎಂದಾದರೆ ಅಪ್ಪನ ಬಳಿ ಹಣ ಕೇಳೋದು ಸರಿಯಲ್ಲ, ಒಂದೋ ನಾ ದುಡಿಬೇಕು ಇಲ್ಲಾ ನನ್ನ ಮದುವೆಯಾದವನ ಬಳಿ ನನ್ನ ಅವಶ್ಯಕತೆಗಳಿಗೆ ಅವಲಂಬಿಸಬೇಕು, ಹಾಗಾಗಿ ಏನು ಮಾಡ್ಲಿ? "

ಅವನ ಉತ್ತರ- ಹೌದು ನಂಗೆ ಅರ್ಥ ಆಗತ್ತೆ ಮದುವೆಯಾದ ಹೊಸತರಲ್ಲಿ ಗಂಡನಬಳಿ ದುಡ್ಡು ಕೇಳೋದು ಕಷ್ಟನೇ, ಹಾಗೇ ಏನಾದ್ರೂ ಬೇಕು ಅಂತ demand ಮಾಡೋದಕ್ಕೂ ಆಗಲ್ಲ, ಅವನೇ ಇಷ್ಟ ಪಟ್ಟು ಕೊಡಿಸಬೇಕು ಏನಾದರೂ ಅಷ್ಟೇ, ಎಂಬುದಾಗಿತ್ತು. ಅಲ್ಲಿಗೆ ಸಂಭಾಷಣೆ ಮುಗಿಯಿತು.

ಕಲ್ಪಿಸಿಕೊಂಡ ರಾಜಕುಮಾರ ಸಿಗುವುದಿಲ್ಲವೆಂಬ ಸ್ಪಷ್ಟತೆ ಸಿಕ್ಕಿದೆ. ನನ್ನ ನಿರ್ಧಾರಗಳು ನನ್ನದೇ ಆಗಿರುತ್ತದೆ. ಹೊಸ ಬದುಕಿನ ಹುಡುಕಾಟ ಹುಡುಗಾಟವಲ್ಲ, ಕೆಲಸಕ್ಕೆ ಸೇರಿ ಒಂದು ವಾರ ಕಳೆಯಿತೇನೋ, ತಿಂಗಳ ಕೊನೆಯಲ್ಲಿ ಸಿಗುವ ಸಂಬಳದ ನಿರೀಕ್ಷೆಯಲ್ಲೇ ನಿರ್ವಹಣೆಗಳು ಶುರುವಾಗಿದೆ.

ಪ್ರತಿದಿನ ಜಾತ್ರೆಯಂತೆಯೇ ಇರುವ ಈ ಊರು, ಕೈ ಹಿಡಿದು ನಡೆಸಲು ಇಲ್ಲಿ ಅಮ್ಮ, ಬೇಕೆಂದಾಗ ಬೇಕಾದದ್ದು ಕೊಡಿಸಲು ಅಪ್ಪ ಯಾರಿಲ್ಲ. ಕಳೆದುಹೋಗದಂತೆ ನಾನೇ ನನ್ನ ನೋಡಿಕೊಳ್ಳಬೇಕಾಗಿದೆ.

ಕನ್ಯಾದಾನದ ಪುಣ್ಯ ಪಡೆಯಲಿಚ್ಚಿಸುತ್ತಿರೋ ಅಪ್ಪ, ಸಾತ್ವಿಕ ಗೃಹಿಣಿಯಾಗಿ ಸುಖವಾಗಿ ಬದುಕಲಿ ಎಂದೆನ್ನುಕೊಳ್ಳುವ ಅಮ್ಮ, ನೀನೊಬ್ಬಳೇ ಅಲ್ಲಾ ನನಗೂ ಬದುಕಿದೆ ಎಂದು ನೆನಪಿಸಲೊಬ್ಬ ಅಣ್ಣ ಎಲ್ಲರೂ ನನ್ನತ್ತಲೇ ಎದುರು ನೋಡುತ್ತಿದ್ದಾರೆ.


2 comments:

  1. ಪ್ರತಿಯೊಬ್ಬ ಹುಡುಗಿಯೂ ಎದುರಿಸಬೇಕಾದ ನಿರ್ಧಾರದ ಕ್ಷಣವನ್ನು ಸರಳ, ಸ್ಪಷ್ಟ ಹಾಗು ನಿರ್ದಿಷ್ಟ ಪದಗಳಲ್ಲಿ ನೀಡಿದ್ದೀರಿ!

    ReplyDelete
  2. ಸುಂದರವಾದ ಸಂಭಾಷಣೆ :)

    ReplyDelete