Monday, June 18, 2018

ಅಪ್ಪ ಕೊಡಿಸಿದ ಮೊದಲ ಬಹುಮಾನ

ನಮ್ಮೂರಿನ ಸರಕಾರಿ ಶಾಲೆ ಮುಚ್ಚಿದ್ದರಿಂದ ಪಕ್ಕದೂರಿನ ಶಾಲೆಗೆ ನನ್ನನ್ನು ಸೇರಿಸಿದರು. ಮೊದಲನೆಯ ತರಗತಿ ಅರ್ಧ ಆಗಿತ್ತು ಹಾಗಾಗಿ ಒಂದನೆಯ ತರಗತಿಯನ್ನು ಅಲ್ಲಿ ಮುಂದುವರೆಸಿದೆ ಅಥವಾ ಎರಡನೆಯ ತರಗತಿಗೆ ದಾಖಲುಮಾಡಿಕೊಂಡಿದ್ದರು. ಅದೇನಾಯ್ತೋ ನೆನಪಿಲ್ಲ.‌ ಆ ವರ್ಷ ಶಾಲೆಯಲ್ಲಿ ಶಾಲಾವಾರ್ಷಿಕೋತ್ಸವವನ್ನು ಆಚರಿಸಲು ಎಲ್ಲಾ ತಯಾರಿ ನಡೆಯುತ್ತಿತ್ತು, ಮಕ್ಕಳಿಗಾಗಿ ಸಾಂಸ್ಕೃತಿಕ  ಕಾರ್ಯಕ್ರಮಗಳು, ಸ್ಫರ್ಧೆಗಳು ಮತ್ತು ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ನಾನು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಆದರೆ ಎಲ್ಲದರಲ್ಲೂ ಮೂರು ನಾಲ್ಕನೆಯ ಸ್ಥಾನದಲ್ಲಿ ತೃಪ್ತಿಪಡಬೇಕಾಯಿತು. ಬಹಳ ಬೇಸರದಲ್ಲಿದ್ದೆ, ಕಡೆಯಲ್ಲಿ ನಡೆದ ಓಟದ ಸ್ಫರ್ಧೆಯಲ್ಲಿ ನನ್ನೆಲ್ಲಾ ಪ್ರಯತ್ನ ಹಾಕಿದೆ ಆದರೆ ದ್ವಿತೀಯ ಸ್ಥಾನ, ಬಹಳ ಬೇಸರ ಆಗೋಯ್ತು.
ಒಂದೇ ಸಮ ಅಳು ಕಡೆಯಲ್ಲಿ ನನ್ನ ಶಿಕ್ಷಕರು ಬಂದು ನಿನಗೂ ಬಹುಮಾನ ಕೊಡುತ್ತೇವೆಂದು ಸಮಾಧಾನ ಮಾಡಿ ನನ್ನ ಹೆಸರು ಬರೆದುಕೊಂಡ ನಂತರವಷ್ಟೇ ನಾನೂ ಅಳು ನಿಲ್ಲಿಸಿದ್ದು.
ಚಿಕ್ಕ‌ಮಕ್ಕಳಿಗಾಗಿ  ಹಾಡು, ನಾಟ್ಯ ಹೇಳಿ ಕೊಟ್ಟದ್ದನ್ನು ಅಚ್ಚುಕಟ್ಟಾಗಿ ಕಲಿತಿದ್ದೆ. ಪ್ರತಿಯೊಂದು ಮಗುವಿನ ಪೋಷಕರಿಗೂ ಶಾಲೆಯಿಂದ ಆಮಂತ್ರಣವಿತ್ತು,‌ ಅದರಲ್ಲೂ ನನ್ನಪ್ಪ ಬಹಳ ಸಂಭಾವ್ಯ ಸಜ್ಜನ ವಿದ್ಯಾವಂತ ಎಂಬ ಕಾರಣಗಳಿಂದ ತುಸು ಅಧಿಕವೇ ಶಾಲೆಯಲ್ಲಿ ಗೌರವ ಹಾಗಾಗಿ ಶಿಕ್ಷಕರಿಂದಲೂ ಸ್ಪೆಷಲ್ ಆಹ್ವಾನ ಇತ್ತು. ಅಪ್ಪ ಅಮ್ಮ ನನ್ನ ಮೊಟ್ಟ ಮೊದಲ ಶಾಲೆ, ಶಾಲಾವಾರ್ಷಿಕೋತ್ಸವ, ಅದರಲ್ಲೂ ನನ್ನ ನೃತ್ಯ ನೋಡಲು ಆಸೆಯಿಂದ ಬಂದಿದ್ದರು.

ಮೊದಲಿಗೆ ಬಹುಮಾನ ವಿತರಣಾ ಕಾರ್ಯಕ್ರಮ ‌ಎಂದು ಧ್ವನಿವರ್ಧಕದಲ್ಲಿ ಘೋಷಣೆ ಬಂದಿತು, ಅಮ್ಮ ನಂಗೂ ಬರುತ್ತೆ ಅಂತ ಅಮ್ಮನ ತೊಡೆಯ ಮೇಲೆ‌ ಕುಳಿತಿದ್ದ ನಾನು ಖುಷಿಯಲ್ಲಿ ಹೇಳಿದೆ,‌ ಅಪ್ಪ ಅಮ್ಮ ಸಂತೋಷದಲ್ಲಿದ್ದರು. ಸ್ವಲ್ಪ ಸಮಯ ಕಳೆಯಿತು ನನ್ನ ಹೆಸರನ್ನು ಕರೆಯಲಿಲ್ಲ ಸ್ವಲ್ಪ ಬೇಸರ ಶುರುವಾಗಿತ್ತು ‌ಬಹುಮಾನ ವಿತರಣಾ ಕಾರ್ಯಕ್ರಮ ಮುಗಿಯವ ಹಂತ ತಲುಪಿದರೂ ನನ್ನನ್ನು ಕರೆಯಲೇ ಇಲ್ಲಾ. ನಾನು ಸಪ್ಪೆ ಮೋರೆ ಹಾಕಿಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡು ಕಾಯುತ್ತಿದ್ದೆ, ಉಹೂಂ ಕರೆಯಲಿಲ್ಲ, ನಂಗೆ ಅಳು ತಡೆಯಲಾಗದೆ ಅಪ್ಪ ಅಮ್ಮನ ಎದುರು ಬಿಕ್ಕಿ ಬಿಕ್ಕಿ ಅತ್ತು ನಂಗೆ ಕೊಡಲೇ ಇಲ್ಲಾ ನಾನು ಗೆದ್ದಿದ್ದೆ ಅಂತ ಒಂದೇ ಸಮ ಅಳುತ್ತಿದ್ದೆ. ಅಪ್ಪ ನಿಧಾನ ಎದ್ದು ಎಲ್ಲೋ ಹೋದರು, ನನಗೆ ಅವಮಾನವಾದಂತೆ ಅನಿಸಿ ಅಳುತ್ತಲೇ ಇದ್ದೆ, ಯಾವ ಡಾನ್ಸು ಬೇಡ, ಹಾಡು ಬೇಡ ನಾನು ಹೋಗಲ್ಲ ಸ್ಟೇಜ್ ಮೇಲೆ ಅಂತ ಅಳುತ್ತಲೇ ಇದ್ದೆ. ಆಗಲೇ
ಧ್ವನಿವರ್ಧಕದಲ್ಲಿ ಈ ವಿಶೇಷ ಬಹುಮಾನವನ್ನು ಇವರಿಗೆ‌ ಕೊಡಲಾಗಿದೆ ಎಂದು ನನ್ನ ಹೆಸರನ್ನು ಕರೆಯಲಾಯಿತು,‌ ಕಣ್ಣು ಒರೆಸಿಕೊಂಡು ಅಮ್ಮನ ನೋಡಿ ಮುಗುಳ್ನಗುತ್ತಾ ವೇದಿಕೆಯತ್ತ ಓಡಿದೆ, ಹೆಡ್‌ ಮಾಸ್ಟರ್ ನನಗೊಂದು ಪಟ್ಟೆ‌ಪಟ್ಟೆಯ ಬಣ್ಣದ ಕಾಗದದಲ್ಲಿ ಸುತ್ತಿದ ಪೊಟ್ಟಣದೊಂದಿಗೆ ಒಂದು ಪೆನ್ಸಿಲ್, ರಬ್ಬರ್, ಮೆಂಡರ್‌ ಕೂಡ ಕೊಟ್ಟರು, ಖುಷಿಯಿಂದ ಬೀಗುತ್ತಾ ಅಮ್ಮನ ಬಳಿ ಓಡಿ ಬಂದು ನಿಂತೆ, ಅಪ್ಪ ಅದಾಗಲೇ ಬಂದು ಕುಳಿತಿದ್ದರು, ಅಪ್ಪಾ ನೋಡಿಲ್ಲಿ ಎಂದು ತುಂಬಿದ್ದ ಪುಟಾಣಿ ಕೈ ನೀಡಿ ನಿಂತೆ ಅಪ್ಪ ನಗುತ್ತಾ‌ ಚೆನ್ನಾಗಿದೆ, very good ಪುಟ್ಟಿ ಎಂದರು,‌‌ ಅಮ್ಮ ಕೆನ್ನೆಗೆ ಮುತ್ತಿಟ್ಟು‌ ಎತ್ತಿಕೊಂಡು ‌ತೊಡೆಯ‌ ಮೇಲೆ ಕೂರಿಸಿಕೊಂಡರು.

ಮೊದಲೇ ನಾನು Curious kid ಅಲ್ಲೇ ಪೊಟ್ಟಣ ಒಡೆದು ನೋಡಿದೆ ಅದರಲ್ಲಿ ಪುಟ್ಟದೊಂದು ಲೋಟವಿತ್ತು, ನನಗಂತು ಸಂಭ್ರಮವೇ ಆದರೂ ಲೋಟದ ಉಪಯುಕ್ತತೆಯು ಅಗತ್ಯತೆಯು ಇರದುದ್ದರಿಂದ  ಅಷ್ಟರಲ್ಲೇ ಇತ್ತು ಅದರ ಮೇಲಿನ‌ ಒಲವು.
ಕೆಲವು ಬಾರಿ ಅದು ನೀರಿನ ಲೋಟವಾಗಿ ಆ ನಂತರದಲ್ಲಿ ಆಟದ ಸಾಮಾನಿನ ಕಿಚನ್ ಸೆಟ್ ಜೊತೆ ಸುಭದ್ರವಾಗಿತ್ತು. ಮತ್ತೊಮ್ಮೆ ಅಲ್ಲಿಂದ ಹೊರಬಂದು ಮೆಹೆಂದಿ ಪೌಡರ್ ಕಲಸುವ ಬಟ್ಟಲಾಗಿ ಜೀವ ತೇಯುತ್ತಿತ್ತು ಒಮ್ಮೆಲೆ ಕಾಣದಂತೆ ಮಾಯವಾಗಿಬಿಟ್ಟಿತ್ತು. ಎಲ್ಲಿ ಹುಡುಕಿದರೂ ಅದು ಸಿಗಲೇ ಇಲ್ಲಾ. ಕ್ರಮೇಣ ಮರೆತುಹೋಯಿತು.

ನಾನು ಡಿಗ್ರಿ ಓದುವಾಗ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದದ್ದಾಗಿ ಪ್ರಥಮ ಬಹುಮಾನ ಒದಗಿ ಬಂದಿತ್ತು,  ಅದೇ  ಶೈಕ್ಷಣಿಕ ಹಂತದ ಕಡೆಯ ಬಹುಮಾನ. ಮನೆಗೆ ತಂದು ಅಪ್ಪ ಅಮ್ಮ ನಿಗೆ ತೋರಿಸಿದೆ ಆಗ ಮಾತಿನ ನಡುವಲ್ಲಿ ಇವಳಿಗೆ ಮೊದಲ ಬಾರಿ ಬಹುಮಾನ ನಾನೇ ಕೊಡಿಸಿದ್ದಕ್ಕೆ ಇಷ್ಟು ವರ್ಷಗಳವರೆಗೂ ಪ್ರತಿವರ್ಷ ಒಂದಲ್ಲಾ ಒಂದರಲ್ಲಿ ವಿಜೇತಳಾಗಿ ಬಂದಿದ್ದಾಳೆ ಎಂದರು.

ಅಪ್ಪಾ , ಬಹುಮಾನ ಕೊಡಿಸಿದ್ದು ? ಹಾಗಂದರೆ ಎಂದಾಗ ಮೊದಲ ಶಾಲಾ ವಾರ್ಷಿಕೋತ್ಸವದ ಬಹುಮಾನ ಪ್ರಸಂಗ ತಿಳಿಸಿದರು.

ನಂಗೆ ಪ್ರೈಜ಼್ ಕೊಡ್ಲಿಲ್ಲ ಅಂತ ಅಳುತ್ತಲೇ ಇದ್ದ ಮಗುವನ್ನು ನೋಡಲಾಗ್ಲಿಲ್ಲ, ಹೋಗಿ ಹೆಡ್ ಮಾಸ್ಟರ್ ಹತ್ರ ವಿಚಾರಿಸಿದೆ ಇವಳು ಸೆಕಂಡ್ ಬಂದಿದ್ದಂತೆ ಮೊದಲ ಬಹುಮಾನವನ್ನಷ್ಟೇ ಕೊಟ್ಟದ್ದಂತೆ ಬಹುಮಾನ ಕಡಿಮೆ ಬಂತೆಂದು, ಹಾಗಾಗಿ ಇವಳಿಗೆ ಕೊಟ್ಟಿರಲಿಲ್ಲ ಅಂದರು, ನಾನು ಸ್ಕೂಲಿಗೆ ಅಂತ ದೇಣಿಗೆ ನೀಡಿ ಅವಳಿಗೊಂದು ಏನಾದರೂ ಬಹುಮಾನ ಅಂತ ಕೊಡಿ ವೇದಿಕೆಯಲ್ಲಿ ಅಂತ ಮನವಿ ಮಾಡಿದೆ ಅದನ್ನು ಒಪ್ಪಿದ ಹೆಡ್ ಮಾಸ್ಟರ್ ವಿಶೇಷ ಬಹುಮಾನವೆಂದು ನಿನಗೆ ಕೊಟ್ಟಿದ್ದರು. ಅಪ್ಪನ ಮಾತು ನನಗೆ ಅರೆ ಕ್ಷಣ ತಟಸ್ಥಳನ್ನಾಗಿಸಿ ಆ ನಂತರ ಬಹಳ ಖುಷಿ ಸಂತೋಷ ನೀಡಿತು. ನನ್ನ ಅಪ್ಪನ ಬಗ್ಗೆ ಹೆಮ್ಮೆಯೂ ಪ್ರತಿಯೂ ಗೌರವವೂ ಮತ್ತಷ್ಟು ಹೆಚ್ಚಿತು. ಮೊನ್ನೆ ಅಟ್ಟ ಸ್ವಚ್ಛಗೊಳಿಸುವಾಗ ಚೀಲ ಒಂದರಲ್ಲಿ ಕಂಡಿತು ಈಗ ಜೋಪಾನವಾಗಿಟ್ಟುಕೊಂಡಿರುವೆ.

ಅಪ್ಪ ಕೊಡಿಸಿದ ಮೊದಲ ಬಹುಮಾನ

ನಮ್ಮೂರಿನ ಸರಕಾರಿ ಶಾಲೆ ಮುಚ್ಚಿದ್ದರಿಂದ ಪಕ್ಕದೂರಿನ ಶಾಲೆಗೆ ನನ್ನನ್ನು ಸೇರಿಸಿದರು. ಮೊದಲನೆಯ ತರಗತಿ ಅರ್ಧ ಆಗಿತ್ತು ಹಾಗಾಗಿ ಒಂದನೆಯ ತರಗತಿಯನ್ನು ಅಲ್ಲಿ ಮುಂದುವರೆಸಿ...